ಅಘೋರೀ ಪಂಥ

 ನರಮಾಂಸಭಕ್ಷಣವೇ ಮೊದಲಾದ ವಾಮಾಚಾರಗಳನ್ನುಳ್ಳ ಸಂನ್ಯಾಸಿಗಳ ಪಂಥ. ಇವರು ಅಘೋರ (ಘೋರನಲ್ಲದ) ಶಿವನ ಉಪಾಸಕರು. ಭಾರತದಲ್ಲಿ ಬಹಳ ಹಿಂದಿನಿಂದಲೂ ಬಿಹಾರ, ಪಶ್ಚಿಮ ಬಂಗಾಳ, ಅಜ್ಮೀರ, ಮೇವಾರ, ಬೀರಾರ್ ಮೊದಲಾದ ಪ್ರಾಂತಗಳಲ್ಲಿ ಇವರು ಆಗಾಗ ಕಾಣಿಸಿಕೊಂಡಿದ್ದಾರೆ. 1901ರ ಸುಮಾರಿನಲ್ಲಿ ಇವರ ಸಂಖ್ಯೆ 5580 ಇತ್ತೆಂದು ತಿಳಿದುಬರುತ್ತದೆ. ಬೊಂಬಾಯಿನ ಮಾನವಶಾಸ್ತ್ರಸಂಘಕ್ಕಾಗಿ ಲೀಕ್ ತೆಗೆದಿರುವ ಕೆಲವು ಛಾಯಾಚಿತ್ರಗಳ ಪ್ರಕಾರ ಅಘೋರಿಗಳ ವೇಷಭೂಷಣಗಳು ಬಹು ವಿಚಿತ್ರವಾಗಿದೆ. ಮೈಗೆ ಶ್ಮಶಾನಭಸ್ಮಲೇಪ. ಎದೆಗೆ ತ್ರಿಮೂರ್ತಿಗಳ ಐಕ್ಯತೆಯನ್ನು ತೋರುವ ಕೆಲವು ಚಿಹ್ನೆಗಳು, ರುದ್ರಾಕ್ಷಿ ಮಾಲೆ. ಕಾಡಿನ ಕರಡಿಯ ಹಲ್ಲುಗಳು ಮತ್ತು ಹಾವಿನ ಮೂಳೆಗಳಿಂದ ಮಾಡಿದ ಸರಗಳು. ಕೈಯಲ್ಲಿ ನರಕಪಾಲ.

 ಈ ಫಕೀರರ ಸಂಖ್ಯೆ ಈಚೆಗೆ ಬಹು ಕಡಿಮೆಯಾಗಿದೆ.     

(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ